ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. == ಹಿನ್ನಲೆ == ೧೯೧೪ರ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾದ ಪರಿಷತ್ತನ್ನು ಸ್ಥಾಪಿಸುವ ವಿಚಾರದಲ್ಲಿ ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ ಉಪಸಮಿತಿಯನ್ನು ರಚಿಸಲಾಯಿತು. ಈ ಉಪಸಮಿತಿಯು ಅಂದಿನ ವಿವಿಧ ಕನ್ನಡ ನಾಡುಗಳ ಪ್ರಾಜ್ಞರೊಡನೆ ಸಮಾಲೋಚಿಸಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ಆ ಸಮ್ಮೇಳನಗಳಲ್ಲಿ ಕೆಲವು ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ ಮಾರ್ಗದರ್ಶನ ಸೂತ್ರಗಳನ್ನು ರೂಪಿಸಿತು. ಕನ್ನಡ ಭಾಷೆಯಲ್ಲಿ ವ್ಯಾಕರಣ, ಚರಿತ್ರೆ, ನಿಘಂಟು ಬರೆಯಿಸುವುದು, ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು. ಬೆರೆ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು. ಕರ್ನಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು. ಗ್ರಂಥಕರ್ತರಿಗೆ ಬಿರುದು ಸಂಭಾವನೆ ಕೊಡುವುದು. ಕರ್ನಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು. ಕರ್ನಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು. == ಈವರೆಗಿನ ಸಮ್ಮೇಳನಗಳ ಪಟ್ಟಿ == == ಉಲ್ಲೇಖಗಳು == == ಹೊರ ಕೊಂಡಿಗಳುಸಚಿತ್ರ ಸಮ್ಮೇಳನ 2011-02-04 ವೇಬ್ಯಾಕ್ ಮೆಷಿನ್ ನಲ್ಲಿ. == ಬರಗೂರರ ಅಧ್ಯಕ್ಷ ಭಾಷಣ:2 , 2016:[[೧]]